ಕಾಂತಾರ ಅಧ್ಯಾಯ ೧’ರ ಮೊದಲ ನೋಟ ಬಿಡುಗಡೆ. ಕುಂದಾಪುರದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸರಳಪೂಜೆಯೊಂದಿಗೆ ಚಿತ್ರಕ್ಕೆ ಚಾಲನೆ
ಕಳೆದ ವರ್ಷ ಬಿಡುಗಡೆಯಾಗಿ ಜಗತ್ತಿನಾದ್ಯಂತ ಮೆಚ್ಚುಗೆ ಪಡೆಯುವುದರ ಜೊತೆಗೆ ದೊಡ್ಡ ಯಶಸ್ಸು ಕಂಡ ‘ಕಾಂತಾರ’ ಚಿತ್ರವನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್, ಈಗ ಇನ್ನೊಂದು ಅಂಥದ್ದೇ ಪ್ರಯತ್ನದೊಂದಿಗೆ ವಾಪಸಾಗುತ್ತಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಮಹತ್ವಾಕಾಂಕ್ಷೆಯ ಮತ್ತು ಬಹುನಿರೀಕ್ಷಿತ ಚಿತ್ರವಾದ ‘ಕಾಂತಾರ – ಅಧ್ಯಾಯ ೧’ರ ಮೊದಲ ನೋಟ ಬಿಡುಗಡೆಯಾಗಿದ್ದು, ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದೆ.
‘ಕಾಂತಾರ’ ಜಗತ್ತನ್ನು ಪರಿಚಯಿಸುವ ಈ ಟೀಸರ್ ನಲ್ಲಿ ರಿಷಭ್ ಶೆಟ್ಟಿ ಅವರ ಪಾತ್ರ ಮತ್ತು ವೇಷ ಗಮನ ಸೆಳೆಯುತ್ತದೆ. ಮೊದಲ ಭಾಗದ ಆ ಆರ್ಭಟ ಇಲ್ಲೂ ಮರುಕಳಿಸಿದ್ದು, ಈ ಮೂಲಕ ಹೊಸದೊಂದು ದಂತಕಥೆಯ ಸೃಷ್ಟಿಗೆ ಮುನ್ನುಡಿ ಬರೆದಿದೆ. ಅಷ್ಟೇ ಅಲ್ಲ, ರಿಷಭ್ ಶೆಟ್ಟಿ ಅವರ ಪಾತ್ರ ವೀಕ್ಷಕರಲ್ಲಿ ಹೊಸದೊಂದು ಕೌತುಕವನ್ನು ಹುಟ್ಟುಹಾಕಿದೆ.
ಮೊದಲ ಭಾಗದ ಯಶಸ್ಸಿಗೆ ಕಾರಣವಾಗಿದ್ದ ಮತ್ತು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಸಂಗೀತವು ಈ ಟೀಸರ್ ಮೂಲಕ ವಾಪಸ್ಸಾಗಿದೆ. ಈ ಟೀಸರ್ ನ ವೈಷಿಷ್ಟ್ಯವೆಂದರೆ, ಚಿತ್ರವು ಏಳು ಭಾಷೆಗಳಲ್ಲಿ ಮೂಡಿಬರುತ್ತಿದ್ದು, ಪ್ರತಿಯೊಂದು ಭಾಷೆಯ ಟೀಸರ್ ಒಂದೊಂದು ರಾಗದ ಮೂಲಕ ಅಂತ್ಯವಾಗಲಿದೆ.
‘ಕಾಂತಾರ’ ಚಿತ್ರವು ಕಳೆದ ವರ್ಷ ಜಗತ್ತಿನಾದ್ಯಂತ ಬಿಡುಗಡೆಯಾಗಿ ಅತ್ಯಂತ ಯಶಸ್ವಿಯಾಗಿತ್ತು. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು, ಜನಪದ ಅಂಶಗಳನ್ನು ಬೆರೆಸಿ ಹೇಳಿದ ರೀತಿ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಪ್ರತಿ ಕಥೆಯನ್ನೂ ವಿಶಿಷ್ಟ ರೀತಿಯಲ್ಲಿ ಕಟ್ಟಿಕೊಡಬೇಕು ಎಂಬ ಹೊಂಬಾಳೆ ಫಿಲಂಸ್ ನ ಬದ್ಧತೆ ‘ಕಾಂತಾರ – ಅಧ್ಯಾಯ ೧’ ರಲ್ಲೂ ಮುಂದುವರೆದಿದ್ದು, ದೈವತ್ವದ ಹೊಸ ವ್ಯಾಖ್ಯಾನ ಈ ಚಿತ್ರದಲ್ಲಾಗಲಿದೆ.
ಕಳೆದ ವರ್ಷ ಹೊಂಬಾಳೆ ಫಿಲಂಸ್ ನಿರ್ಮಾಣದ ‘ಕೆಜಿಎಫ್ ೨’ ಮತ್ತು ‘ಕಾಂತಾರ’ ಚಿತ್ರಗಳು ಜಾಗತಿಕವಾಗಿ ೧೬೦೦ ಕೋಟಿ ರೂ ಸಂಗ್ರಹಿಸಿತ್ತು. ಹೊಂಬಾಳೆಯ ಮುಂದಿನ ಬಿಡುಗಡೆಯಾದ ‘ಸಲಾರ್’ ಈ ವರ್ಷದ ಬ್ಲಾಕ್‌ಬಸ್ಟರ್ ಆಗುವ ಲಕ್ಷಣಗಳು ಈಗಾಗಲೇ ಗೋಚರಿಸಿವೆ. ಈ ಬಹುನಿರೀಕ್ಷಿತ ಚಿತ್ರದ ಟ್ರೇಲರ್ ಡಿ. ೧ರಂದು ಬಿಡುಗಡೆಯಾಗಲಿದೆ.
‘ಕಾಂತಾರ -ಅಧ್ಯಾಯ ೧’ ಚಿತ್ರವು ಬಹುನಿರೀಕ್ಷಿತ ಚಿತ್ರವಾಗಿದ್ದು ಮುಂದಿನ ವರ್ಷ ೭ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಡಿಸೆಂಬರ್ ಅಂತ್ಯಕ್ಕೆ ಚಿತ್ರೀಕರಣ ಪ್ರಾರಂಭವಾಗಲಿದ್ದು, ತಾರಾಬಳಗದ ಬಗ್ಗೆ ಸದ್ಯದಲ್ಲೇ ಹೆಚ್ಚಿನ ಮಾಹಿತಿ ಹೊರಬೀಳಲಿದೆ.
ಕುಂದಾಪುರ ಸಮೀಪದ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದಲ್ಲಿ ಈ ಚಿತ್ರದ ಸರಳಪೂಜಾ ಸಮಾರಂಭ ನಡೆಯಿತು. ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಅಣ್ಣ ಮಂಜುನಾಥ್ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ರಿಷಭ್ ಶೆಟ್ಟಿ ಪುತ್ರಿ ರಾಧ್ಯ ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರತಂಡದ ಸದಸ್ಯರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.