ಮನುಷ್ಯನ ದೈನಂದಿನ ಬದುಕಿನ ಬವಣೆಗಳ ಸುತ್ತಲ್ಲಿನ ಕಥೆ ಆಧರಿಸಿದೆ “ಮುದುಡಿದ ಎಲೆಗಳು” .
ರಿಯೊ ಪ್ರೊಡಕ್ಷನ್ ಲಾಂಛನದಲ್ಲಿ ರಂಜನಿ ಅವರು ನಿರ್ಮಿಸುತ್ತಿರುವ ಹಾಗೂ ಎಂ.ಶಂಕರ್ ನಿರ್ದೇಶಿಸುತ್ತಿರುವ ” ಮುದುಡಿದ ಎಲೆಗಳು” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಆರಂಭವಾಗಿತು. ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಚಿತ್ರತಂಡದವರು ಹಾಗೂ ಅನೇಕ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಚಿತ್ರದ ಕುರಿತು ಮೊದಲು ಮಾತನಾಡಿದ ನಿರ್ಮಾಪಕ ಹಾಗೂ ನಿರ್ದೇಶಕ ಎಂ.ಶಂಕರ್, ನಮ್ಮ ರಿಯೊ ಪ್ರೊಡಕ್ಷನ್ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ನನ್ನ ಪತ್ನಿ ರಂಜನಿ ಈ ಚಿತ್ರದ ಸಹ ನಿರ್ಮಾಪಕಿ.ಮನುಷ್ಯ ದಿನನಿತ್ಯ ಎದುರಿಸುವ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಕಥೆ ಬರೆದಿದ್ದೇನೆ. “ಮುದುಡಿದ ಎಲೆಗಳು” ಹೇಗೆ ಚದರಿ ಹೋಗುತ್ತದೆ . ಮತ್ತೆ ಹೇಗೆ ಒಂದಾಗುತ್ತದೆ ಎಂಬ ಅಂಶವನ್ನೂ ಕಥೆ ಆಧರಿಸಿದೆ. ಮೂವತ್ತು ದಿನಗಳ ಒಂದೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಹಾಡುಗಳು ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಳ್ಳಲಿದೆ. ಈ ಚಿತ್ರದಲ್ಲಿ ರಂಜಿತ್ ಕುಮಾರ್, ಪಂಕಜ್ ಎಸ್ ನಾರಾಯಣ್ ಹಾಗೂ ದರ್ಶನ್ ಸೂರ್ಯ ಮೂವರು ನಾಯಕರು. ಊರ್ವಶಿ ರಾಯ್, ಸೀಮಾ ವಸಂತ್ ಹಾಗೂ ಸುಶ್ಮಿತ ನಾಯಕಿಯರು. ಹಿರಿಯ ನಟ ಭವ್ಯ, ಶೋಭ್ ರಾಜ್, ಶಂಕರ್ ಅಶ್ವಥ್, ಹರ್ಷಿಕಾ ಪೂಣ್ಣಚ್ಚ, ಸಂತೋಷ್ ರೆಡ್ಡಿ, ಅಮಿತ್ ರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ರಮೇಶ್ ಕೋಟೆ ಸಹ ನಿರ್ದೇಶನ, ಶ್ಯಾಮ್ ಸಿಂಧನೂರು ಛಾಯಾಗ್ರಹಣ ಹಾಗೂ ವಿಕಾಸ್ ವಸಿಷ್ಠ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ ಎಂದರು.
ನನ್ನ ಪತಿ ಶಂಕರ್ ಅವರ ಸಾರಥ್ಯದಲ್ಲಿ “ಮುದುಡಿದ ಎಲೆಗಳು” ಚಿತ್ರ ಉತ್ತಮವಾಗಿ ಮೂಡಿ ಬರಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಸಹ ನಿರ್ಮಾಪಕಿ ರಂಜನಿ. ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಸಹ ನಿರ್ದೇಶಕ ರಮೇಶ್ ಕೋಟೆ ನೀಡಿದರು.
ಚಿತ್ರದಲ್ಲಿ ನಟಿಸುತ್ತಿರುವ ಭವ್ಯ, ಅಮಿತ್ ರಾಜ್, ರಂಜಿತ್ ಕುಮಾರ್, ಪಂಕಜ್ ಎಸ್ ನಾರಾಯಣ್, ದರ್ಶನ್ ಸೂರ್ಯ, ಊರ್ವಶಿ ರಾಯ್, ಸುಶ್ಮಿತ, ಸೀಮಾ ವಸಂತ್ ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ಮಾತನಾಡಿದರು.