ಅದ್ದೂರಿಯಾಗಿ ನೆರವೇರಿತು ಭಾರ್ಗವಿ ವಿಖ್ಯಾತಿ ನವತಾರ್ಫ್ಯಾಷನ್ ಅವಾರ್ಡ್ಸ್ ನೈಟ್ ಮತ್ತು ವಿಖ್ಯಾತಿ ಸ್ಕೂಲ್ ಆಫ್ ಫ್ಯಾಷನ್ & ಡಿಸೈನ್ ವಾರ್ಷಿಕೋತ್ಸವ .
ಎತ್ತರದ ವೇದಿಕೆಯ ತುಂಬೆಲ್ಲಾ ಶಿಲಾ ವೈವಿಧ್ಯದ ಚಿತ್ತಾರ; ಕಣ್ಮನ ಸೆಳೆಯುವ ಬೆಳಕಿನ ಆಟ. ಕಿವಿ ಗಡಚಿಕ್ಕುವ ಶಬ್ಧದ ನಡುವೆ ಲಲನೆಯರ ವೈಯಾರದ ನಡಿಗೆ..
ಇದು ಬೆಂಗಳೂರಿನಲ್ಲಿ ಹೊಸದಾಗಿ ತೆರೆದುಕೊಂಡಿರುವ ಡಿವಿನಿಟಿ ಮಾಲ್ ನಲ್ಲಿ ಇತ್ತೀಚಿಗೆ ಕಂಡು ಬಂದ ಸಂಭ್ರಮದ ದೃಶ್ಯಗಳು..
ಭಾರ್ಗವಿ ವಿಖ್ಯಾತಿ (ವಿಖ್ಯಾತಿ ಸ್ಕೂಲ್ ಆಫ್ ಫ್ಯಾಷನ್ & ಡಿಸೈನ್) ಏರ್ಪಡಿಸಿದ್ದ ನವತಾರ್ ಫ್ಯಾಷನ್ ಶೋ, ಮ್ಯಾಗಜಿನ್ ಬಿಡುಗಡೆ ಹಾಗೂ ಅವಾರ್ಡ್ಸ್ ನೈಟ್ಸ್ ನ ಸಂಭ್ರಮದ ಕಾರ್ಯಕ್ರಮ ಅದಾಗಿತ್ತು.
ಮೊದಲಿಗೆ ಭಾರ್ಗವಿ ವಿಖ್ಯಾತಿ ಅವರ ಶಾಲೆಯ ಫೋಟೋ ಶೂಟ್ ವೈವಿಧ್ಯದ ಅಂಶಗಳು ತೆರೆದುಕೊಂಡವು. ಶ್ರೀಲೀಲಾ, ಧನ್ಯಾ ರಾಮ್ ಕುಮಾರ್, ನಿಶ್ಚಿಕಾ ನಾಯ್ಡು, ಶಾನ್ವಿ ಶ್ರೀವಾಸ್ತವ್ ಮೊದಲಾದ ತಾರೆಯರ ವಿಭಿನ್ನ ಬಗೆಯ ಫೋಟೋ ಅನಾವರಣಗೊಂಡಿತು.
ಬಳಿಕ ಅವಾರ್ಡ್ಸ್ ನೈಟ್ ನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಟ ಸಂತೋಷ್ ಆರ್ಯನ್, ನಟಿ ಖುಷಿ ರವಿ, ಯತೀಶ್ ರಾಕ್ ಲೈನ್ ವೆಂಕಟೇಶ್, ಐಶ್ವರ್ಯ ಡಿ ಕೆ ಹೆಗಡೆ, ಪನ್ನಗಾಭರಣ, ಅರ್ಚನಾ ಕೊಟ್ಟಿಗೆ, ಗಣೇಶ್ ಪಾಪಣ್ಣ, ವೈಜಯಂತಿ, ಪುಟಾಣಿ ಗಾಯಕಿ ರಿಷಿ ಕುಮಾರ್ ಪಾಲ್ಗೊಂಡಿದ್ದರು.
ಕೊನೆಯಲ್ಲಿ ಪ್ರದರ್ಶನಗೊಂಡ ದಸರಾ ಉತ್ಸವ ನೆನಪಿಸುವ ಫ್ಯಾಷನ್ ನಲ್ಲಿ ಮನೋಲಾಸಗೊಳಿಸುವ ನಡಿಗೆ ಮತ್ತು ದುರ್ಗಾ ದೇವಿ ನೆನಪಿಸುವ ವಸ್ತ್ರ ವಿನ್ಯಾಸ ಗಮನ ಸೆಳೆಯಿತು.
ಮುಖ್ಯಸ್ಥೆ ಭಾರ್ಗವಿ ವಿಖ್ಯಾತಿ ಸಂಸ್ಥೆಯ ಧೇಯೋದ್ದೇಶಗಳನ್ನು ವಿವರಿಸಿದರು. 2020 ರಲ್ಲಿ ಫ್ಯಾಷನ್ ಜಗತ್ತಿನ ಅಚ್ಚರಿಗಳನ್ನು ತಿಳಿಸಲು ಸಂಸ್ಥೆ ಆರಂಭಗೊಂಡಿತು.
ನವತಾರ್ ಮೂಲಕ ವಿವಿಧ ಅದ್ದೂರಿ ಕಾರ್ಯಕ್ರಮಗಳನ್ನು ನೀಡಿದ ಸಂಸ್ಥೆ ಈಗ ಮೂರು ವರ್ಷಗಳನ್ನು ಪೂರೈಸಿದೆ ಹಾಗೂ ವಿಖ್ಯಾತಿ ಸ್ಕೂಲ್ ಆಫ್ ಫ್ಯಾಷನ್ & ಡಿಸೈನ್ ಒಂದು ವರ್ಷ ಪೂರೈಸಿದೆ. ಈ ಬಾರಿ 2023ರಲ್ಲಿ ಒಂಭತ್ತು ಜನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹೆಣ್ಣು ಮಕ್ಕಳ ಫೋಟೊ ಶೂಟ್ ಮಾಡುತ್ತಿದ್ದೇವೆ. ಇದರಲ್ಲಿ ಐಪಿಎಸ್ ಅಧಿಕಾರಿ, ಡಾಕ್ಟರ್, ಎನ್ ಜಿ ಓ ನಡೆಸುತ್ತಿರುವವರು ಹೀಗೆ ವಿವಿಧ ಕ್ಷೇತ್ರದ ಗಣ್ಯರಿರುತ್ತಾರೆ ಎಂದರು ವಿಖ್ಯಾತಿ.
ನವರಾತ್ರಿ ಉತ್ಸವದ ಈ ಸಂದರ್ಭದಲ್ಲಿ ಫ್ಯಾಷನ್ ಜಗತ್ತಿನ ದೇವಿಯರನ್ನು ಕಣ್ತುಂಬಿಕೊಂಡ ಆನಂದದಲ್ಲಿ ಪ್ತೇಕ್ಷಕರು ನಲಿದರು.