ಅಜಯ್ ರಾಜ್ ಅಭಿನಯದ “ಮನ್ ರೇ ” ಚಿತ್ರ ನವೆಂಬರ್ ನಲ್ಲಿ ಆರಂಭ .

ಕಳೆದ ತಿಂಗಳು ನಡೆದ ‘ಸೇನಾಪುರ’ ಚಿತ್ರದ ಟ್ರೇಲರ್ ಬಿಡುಗಡೆ ಸಮಯದಲ್ಲೇ ಸದ್ಯದಲ್ಲೇ ಇನ್ನೊಂದು ಹೊಸ ಚಿತ್ರದ ಘೋಷಣೆ ಮಾಡುವುದಾಗಿ ನಿರ್ದೇಶಕ ಗುರು ಸಾವನ್‍ ಹೇಳಿಕೊಂಡಿದ್ದರು. ಅದರಂತೆ ಒಂದು ತಿಂಗಳ ಒಳಗೆ ಅವರು ಇನ್ನೊಂದು ಹೊಸ ಚಿತ್ರದೊಂದಿಗೆ ಬಂದಿದ್ದಾರೆ. ಅದೇ ‘ಮನ್ ರೇ’. ಚಿತ್ರದ ಘೋಷಣೆ ಅಧಿಕೃತವಾಗಿ ಸೋಮವಾರದಂದು ಆಗಿದ್ದು, ನವೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

ಭೂಮಿಕಾ ಕ್ರಿಯೇಷನ್ಸ್ ನಡಿ ತಿಲಕ್‍ ರಾಜು ಮತ್ತು ರಾಜಣ್ಣ ನಿರ್ಮಿಸುತ್ತಿರುವ ‘ಮನ್‍ರೇ’ ಚಿತ್ರದಲ್ಲಿ ಅಜಯ್‍ ರಾಜ್‍ ನಾಯಕನಾಗಿ ಕಾಣಿಸಿಕೊಂಡರೆ, ಗಾಯಕಿ ಐಶ್ವರ್ಯ ರಂಗರಾಜನ್‍ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು, ‘ಅಮೃತವರ್ಷಿಣಿ’ ಖ್ಯಾತಿಯ ರಜನಿ, ಪ್ರಮೋದ್‍ ಶೆಟ್ಟಿ, ಸೂರ್ಯ ಸಿದ್ಧಾರ್ಥ್, ಅಮಿತ್ ರಾಜ್ ಮುಂತಾದವರು ನಟಿಸುತ್ತಿದ್ದಾರೆ.

‘ಮನ್‍ರೇ’ ಕುರಿತು ಮಾತನಾಡುವ ಗುರು ಸಾವನ್‍, ‘’ಮನ್‍ ರೇ’ ಎಂದರೆ ಮನಸ್ಸಿನ ಎಕ್ಸ್ ರೇ ಎಂದರ್ಥ. ಮನಸ್ಸಿನ ತೊಳಲಾಟವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಕಾನ್ಶಿಯಸ್‍ ಮತ್ತು ಸಬ್‍ ಕಾನ್ಶಿಯಸ್‍ ಮೈಂಡ್‍ ನಡುವಿನ ತೊಳಲಾಟವಿದು. ಸುಮಾರು 8-9 ವರ್ಷಗಳ ಹಿಂದೆಯೇ ಕಥೆ ಮಾಡಿಕೊಂಡಿದ್ದೆ. ಇದೊಂದು ಸೈಕಲಾಜಿಕಲ್‍ ಥ್ರಿಲ್ಲರ್ ಕಥೆ. ಸಂಪೂರ್ಣ ಕಾಲ್ಪನಿಕ’ ಎನ್ನುತ್ತಾರೆ ಅವರು.
ಈ ಸಮಸ್ಯೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ ಎನ್ನುವ ಗುರು, ‘ನಾವು ಏನೋ ಕೆಲಸ ಮಾಡುತ್ತಿದ್ದರೆ, ಮನಸ್ಸು ಇನ್ನೇನೋ ಯೋಚಿಸುತ್ತಿರುತ್ತದೆ. ಇಲ್ಲಿ ನಾಯಕ ಆರವ್‍, ಭ್ರಮೆಯ ಲೋಕದಲ್ಲಿ ಬದುಕುತ್ತಿರುತ್ತಾನೆ. ಅವನು ವಾಸ್ತವಕ್ಕೆ ಹೇಗೆ ಬರುತ್ತಾನೆ. ಅವನ ಸುತ್ತಲಿನವರು, ಅವನ ಈ ಸಮಸ್ಯೆಯಿಂದ ಎಷ್ಟೆಲ್ಲಾ ಕಷ್ಟಪಡುತ್ತಾರೆ ಎನ್ನುವುದನ್ನು ಈ ಚಿತ್ರದ ಮೂಲಕ ಪ್ರಯತ್ನ ಮಾಡುತ್ತಿದ್ದೇವೆ. ಪ್ರಮೋದ್‍ ಶೆಟ್ಟಿ ಇಲ್ಲಿ ಅರಸ್‍ ಎಂಬ ವೈದ್ಯರ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಪ್ರೀಪ್ರೊಡಕ್ಷನ್‍ ಕೆಲಸಗಳು ನಡೆಯುತ್ತಿವೆ. ನವೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಿ ಮುಂದಿನ ವರ್ಷ ಮೇನಲ್ಲಿ ಬಿಡುಗಡೆ ಮಾಡುವ ಪ್ಲಾನ್‍ ಇದೆ’ ಎನ್ನುತ್ತಾರೆ.

ಸಾಮಾನ್ಯವಾಗಿ ಸೈಕಲಾಜಿಕಲ್‍ ಥ್ರಿಲ್ಲರ್ ಎಂದರೆ ಕ್ರೈಮ್‍ ಅಥವಾ ಹಿಂಸೆ ಇರುತ್ತದೆ. ಆದರೆ, ಈ ಚಿತ್ರದಲ್ಲಿ ಅಂಥದ್ದು ಯಾವುದೂ ಇರುವುದಿಲ್ಲ ಎನ್ನುವ ಅಜಯ್‍ ರಾಜ್‍, ‘ಸರಳವಾಗಿ ಹೇಳಬೇಕು ಎಂದರೆ ಇದು ಮನಸ್ಸಿನೊಳಗೆ ನಡೆಯುವ ಸಂಘರ್ಷ. ಇಲ್ಲಿ ನಾಯಕನೇ ಸಮಸ್ಯೆ. ಅವನಿಂದ ಏನಾಗುತ್ತದೆ ಎಂಬುದು ಕಥೆ’ ಎಂದರು.
ರಜನಿಗೆ ಇಲ್ಲಿ ವಿಶೇಷ ಪಾತ್ರ ಸಿಕ್ಕಿದೆಯಂತೆ. ಅಷ್ಟೇ ಅಲ್ಲ, ಇದು ಅವರ ಕನಸಿನ ಪಾತ್ರವಂತೆ. ‘ನಿರ್ದೇಶಕರು ಬಂದು ಒಂದು ಸೀನ್‍ ಕೇಳಿ, ಆ ನಂತರ ಚಿತ್ರದಲ್ಲಿ ನಟಿಸುವ ಬಗ್ಗೆ ಯೋಚನೆ ಮಾಡಿ ಎಂದರು. ಬಹುಶಃ ಗ್ಲಾಮರಸ್‍ ಪಾತ್ರ ಇರಬಹುದು ಎಂದುಕೊಂಡೆ. ಆದರೆ, ಹಾಗೇನಿಲ್ಲ. ಇದೊಂದು ಸವಾಲಿನ ಪಾತ್ರ. ನಾನು ಇದುವರೆಗೂ ನೋಡಿರುವ ಚಿತ್ರಗಳಲ್ಲಿ ಇಂಥದ್ದೊಂದು ಪಾತ್ರ ಬಂದಿಲ್ಲ. ಹಾಗೆಯೇ ಇಂಥದ್ದೊಂದು ಪಾತ್ರ ಹೇಗೆ ಹೊಳೆಯಿತು ಎಂಬ ಆಶ್ಚರ್ಯವೂ ಆಯಿತು’ ಎಂದರು. ಇನ್ನು, ಮತ್ತೊಬ್ಬ ನಾಯಕಿಯಾಗಿರುವ ಐಶ್ವರ್ಯಾ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಖುಷಿಪಟ್ಟರು.
ನಿರ್ಮಾಪಕರಲ್ಲೊಬ್ಬರಾದ ತಿಲಕ್‍ ರಾಜು ಅನಿವಾಸಿ ಭಾರತೀಯರು. ಸದ್ಯ ಅಮೇರಿಕಾದಲ್ಲಿ ವಾಸಿಸುತ್ತಿರುವ ಅವರಿಗೆ ಚಿತ್ರ ಮಾಡುವುದು ಬಹುದಿನಗಳ ಕನಸಂತೆ. ಈ ಚಿತ್ರದ ಮೂಲಕ ಅದು ನನಸಾಗುತ್ತಿರುವುದಾಗಿ ಖುಷಿಪಟ್ಟರು.
‘ಮನ ರೇ‘ ಚಿತ್ರಕ್ಕೆ ಆದಿ ಅವರ ಛಾಯಾಗ್ರಹಣವಿದೆ. ಈಗಾಗಲೇ ಸಾಕಷ್ಟು ಜನಪ್ರಿಯ ಚಿತ್ರಗಳಿಗೆ ಹಾಡಿ, ಉತ್ತಮ ಗಾಯಕರೆನಿಸಿಕೊಂಡಿರುವ ಅನಿರುದ್ಧ್ ಶಾಸ್ತ್ರಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಜೊತೆಗೆ ಪ್ರಮುಖಪಾತ್ರದಲ್ಲೂ ನಟಿಸುತ್ತಿದ್ದಾರೆ.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments