ನಮ್ಮ ಬಗ್ಗೆ

ಕನ್ನಡ ಚಿತ್ರರಂಗದ ಪ್ರತಿಷ್ಠಿತ ಪ್ರಚಾರ ಸಂಸ್ಥೆಯಾದ ಶ್ರೀ ರಾಘವೇಂದ್ರ ಚಿತ್ರವಾಣಿ, ಕಳೆದ ನಾಲ್ಕೂವರೆ ದಶಕಗಳಿಂದ ಸಿನಿಮಾ ಪ್ರಚಾರ ಮಾಡುತ್ತಾ ಬಂದಿರುವುದಷ್ಟೇ ಅಲ್ಲ, ಚಂದನವನದ ಅತ್ಯಂತ ಬೇಡಿಕೆಯ ಪ್ರಚಾರ ಸಂಸ್ಥೆಯಾಗಿದೆ. ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು ಇದುವರೆಗೂ 2500ಕ್ಕೂ ಹೆಚ್ಚು ಚಿತ್ರಗಳ ಪ್ರಚಾರ ಕಾರ್ಯವನ್ನು ಕೈಗೊಂಡಿದೆ. ಸಿನಿಮಾ ಪ್ರಚಾರ ಜೊತೆಗೆ, ಚಿತ್ರರಂಗಕ್ಕಾಗಿ ದುಡಿದ ಹಲವು ಸಾಧಕರನ್ನು ಕಳೆದ ಹಲವು ವರ್ಷಗಳಿಂದ ಗೌರವಿಸುತ್ತಾ ಬಂದಿದೆ.

1976ರಲ್ಲಿ ಬಿಡುಗಡೆಯಾದ ಡಾ. ವಿಷ್ಣುವರ್ಧನ್ ಮತ್ತು ಮಂಜುಳಾ ಅಭಿನಯದ ‘ಸೊಸೆ ತಂದ ಸೌಭಾಗ್ಯ’ ಚಿತ್ರದ ಮೂಲಕ ಪ್ರಚಾರಕರ್ತರಾಗುವುದರ ಜೊತೆಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಹುಟ್ಟುಹಾಕಿದ ಸುಧೀಂದ್ರ, ಅಲ್ಲಿಂದ ಇಲ್ಲಿಯವರೆಗೂ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಪ್ರಚಾರಕರ್ತರಾಗಿದ್ದಾರೆ.

 

ಬರೀ ಪ್ರಚಾರಕರ್ತರಷ್ಟೇ ಅಲ್ಲ, ನಿರ್ಮಾಣದಲ್ಲೂ ಗುರುತಿಸಿಕೊಂಡ ಡಿ.ವಿ. ಸುಧೀಂದ್ರ, ‘ಒಲವಿನ ಉಡುಗೊರೆ’, ‘ಗುಂಡನ ಮದುವೆ’, ‘ಗಣೇಶನ ಮದುವೆ’, ‘ನಗಗುನಗುತಾ ನಲಿ’, ‘ಪಟ್ಟಣಕ್ಕೆ ಬಂದ ಪುಟ್ಟ’ ಮುಂತಾದ ಚಿತ್ರಗಳನ್ನು ಸ್ವತಂತ್ರವಾಗಿ ಮತ್ತು ಇನ್ನಿತರ ಕೆಲವು ನಿರ್ಮಾಪಕರ ಸಹಯೋಗದೊಂದಿಗೆ ಚಿತ್ರಗಳನ್ನು ನಿರ್ಮಿಸಿದರು. ಅವರ ಈ ಸಾಧನೆಗೆ ಕೆಂಪೇಗೌಡ ಪ್ರಶಸ್ತಿ, ಪ್ರಚಾರ ರಾಜ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಪ್ರಶಸ್ತಿಗಳ ಜೊತೆಗೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ‘ಕವನ ಹಂಸ’ ಎಂಬ ಬಿರುದು ಸಹ ಸಿಕ್ಕಿದೆ.

ಡಿ.ವಿ. ಸುಧೀಂದ್ರ ಅವರ ನಿಧನದ ನಂತರ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಸುಧೀಂದ್ರ ವೆಂಕಟೇಶ್, ಡಿ.ಜಿ. ವಾಸುದೇವ ಮತ್ತು ಸುಧೀಂದ್ರ ಅವರ ಮಗ ಸುನೀಲ್ ಮುನ್ನಡೆಸುತ್ತಿದ್ದು, ಈ ಪೈಕಿ 2006ರಿಂದ ಇಲ್ಲಿಯವರೆಗೂ ಸುಧೀಂದ್ರ ವೆಂಕಟೇಶ್, ‘ಮುಂಗಾರು ಮಳೆ’, ‘ದುನಿಯಾ’, ‘ಕೆಜಿಎಫ್’, ‘ಕಾಂತಾರ’ ಸೇರಿದಂತೆ 1200ಕ್ಕೂ ಹೆಚ್ಚು ಚಿತ್ರಗಳಿಗೆ ಪ್ರಚಾರಕರ್ತರಾಗಿ ಕೆಲಸ ಮಾಡಿದ್ದಾರೆ. ಕಳೆದ ಮೂರೂವರೆ ದಶಕಗಳಿಂದ ಪ್ರಚಾರಕರ್ತರಾಗಿ ಕೆಲಸ ಮಾಡುತ್ತಿರುವ ಸುಧೀಂದ್ರ ವೆಂಕಟೇಶ್, ಕನ್ನಡ ಚಿತ್ರರಂಗದ ಬಹುಬೇಡಿಕೆಯ ಪ್ರಚಾರಕರ್ತರಾಗಿ ಗುರುತಿಸಿಕೊಂಡಿರುವುದು ವಿಶೇಷ.

ಹೊಂಬಾಳೆ ಫಿಲಂಸ್, ರಾಕ್ಲೈನ್ ಪ್ರೊಡಕ್ಷನ್ಸ್, ಜಯಣ್ಣ ಕಂಬೈನ್ಸ್, ಶೈಲೇಂದ್ರ ಪ್ರೊಡಕ್ಷನ್ಸ್, ಪುಷ್ಕರ್ ಫಿಲಂಸ್, ಪರಂವಾ ಸ್ಟುಡಿಯೋಸ್, ಕಿಚ್ಚ ಕ್ರಿಯೇಷನ್ಸ್, ತೂಗುದೀಪ ಪ್ರೊಡಕ್ಷನ್ಸ್, ಉಪೇಂದ್ರ ಪ್ರೊಡಕ್ಷನ್ಸ್, ಎಸ್.ವಿ. ಪ್ರೊಡಕ್ಷನ್ಸ್, ಕೆಆರ್ಜಿ ಸ್ಟುಡಿಯೋಸ್, ಸಂದೇಶ್ ಪ್ರೊಡಕ್ಷನ್ಸ್ ಸೇರಿದಂತೆ ಕನ್ನಡ ಚಿತ್ರರಂಗದ ಕೆಲವು ಜನಪ್ರಿಯ ನಿರ್ಮಾಣ ಸಂಸ್ಥೆಗಳಿಗೆ ಖಾಯಂ ಪ್ರಚಾರಕರ್ತರಾಗಿ ಗುರುತಿಸಿಕೊಂಡಿರುವ ಶ್ರೀ ರಾಘವೇಂದ್ರ ಚಿತ್ರವಾಣಿಯು ಇತ್ತೀಚಿನ ವಷ್ಗಳಲ್ಲಿ ಕನ್ನಡದಿಂದ ಬಿಡುಗಡೆಯಾದ ಕೆಲವು ಜನಪ್ರಿಯ ಪ್ಯಾನ್ ಇಂಡಿಯಾ ಚಿತ್ರಗಳ ಪ್ರಚಾರದ ಕೆಲಸಗಳನ್ನು ನಿರ್ವಹಿಸಿದೆ. ‘ಕೆಜಿಎಫ್’, ‘ಕಬ್ಜ’, ‘777 ಚಾರ್ಲಿ’, ‘ಈಗ’, ಸೈರಾ ನರಸಿಂಹ ರೆಡ್ಡಿ’, ‘ನೋಟ’, ‘ಡಿಯರ್ ಕಾಮ್ರರೇಡ್’ ಮುಂತಾದ ಹಲವು ಪ್ಯಾನ್ ಇಂಡಿಯಾ ಚಿತ್ರಗಳಿಗೆ ಪ್ರಚಾರ ಕೆಲಸವನ್ನು ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯು ನಿರ್ವಹಿಸಿದೆ.

 

ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 25 ವರ್ಷಗಳಾದ ಶುಭ ಸಂದರ್ಭದಲ್ಲಿ ಡಿ.ವಿ. ಸುಧೀಂದ್ರ ಅವರು, ತಮ್ಮ ಕಣ್ಣುಗಳೇ ಎಂದು ಭಾವಿಸಿದ್ದ ನಿರ್ಮಾಪಕರು ಮತ್ತು ಪ್ರಚಾರಕರ್ತರನ್ನು ಗೌರವಿಸುವ ಸಂಪ್ರದಾಯವನ್ನು ಶುರು ಮಾಡಿದರು. ಎರಡು ಪ್ರಶಸ್ತಿಗಳಿಂದ ಪ್ರಾರಂಭವಾದ ಈ ಸಮಾರಂಭದಲ್ಲೀಗ 11 ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಆಯಾ ವರ್ಷದ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಸುಧೀಂದ್ರ ಅವರು ಹುಟ್ಟಹಾಕಿದ ಈ ಸಂಪ್ರದಾಯವನ್ನು ವೆಂಕಟೇಶ್ ಮುಂದುವರೆಸಿದ್ದು, ಪ್ರತೀ ವರ್ಷ ನಿರಂತರವಾಗಿ ಪ್ರಶಸ್ತಿ ನೀಡುತ್ತಾ ಬರುವುದರ ಜೊತೆಗೆ, ತಮ್ಮ ಚಿಕ್ಕಪ್ಪ ಹುಟ್ಟುಹಾಕಿದ ಸಂಪ್ರದಾಯವನ್ನು ಯಶಸ್ವಿಯಾಗಿ ಮುಂದುವರೆಸಿದ್ದಾರೆ.

ಕನ್ನಡವಲ್ಲದೆ ಇಂಗ್ಲೀಷ್, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳನ್ನು ಸುಲಲಿತವಾಗಿ ಮಾತನಾಡುವ ವೆಂಕಟೇಶ್, ಇಂದು ಕರ್ನಾಟಕದ ಆಚೆಗೂ ತಮ್ಮ ಕೆಲಸ, ಶ್ರಮ ಮತ್ತು ಶ್ರದ್ಧೆಯಿಂದ ಗುರುತಿಸಿಕೊಂಡಿದ್ದಾರೆ. ತಮ್ಮ ಹಲವು ವರ್ಷಗಳ ಪರಿಶ್ರಮದಿಂದ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.